ಹಯವದನರಾವ್, ಸಿ
	1865-1946. ಪ್ರಸಿದ್ಧ ವಿದ್ವಾಂಸರು. ಆಂಧ್ರಪ್ರದೇಶ ರಾಜ್ಯದ ಕೃಷ್ಣಗಿರಿ ತಾಲ್ಲೂಕಿನ ಹೊಸೂರಿನಲ್ಲಿ 1865 ಜುಲೈ 10ರಂದು ಜನಿಸಿದರು. ಇವರ ತಂದೆ ರಾಜಾರಾವ್. ಹಯವದನ ರಾಯರು ಹೊಸೂರಿನಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನೂ ಮದರಾಸಿನ ಹಿಂದು ಹೈಸ್ಕೂಲಿನಲ್ಲಿ ಪ್ರೌಢಶಾಲಾಭ್ಯಾಸವನ್ನೂ ಮುಗಿಸಿದರು. ಅನಂತರ ಮದರಾಸಿನ ಪ್ರೆಸಿಡೆನ್ಸಿ ಕಾಲೇಜು ಮತ್ತು ಕ್ರಿಶ್ಚಿಯನ್ ಕಾಲೇಜುಗಳಲ್ಲಿ ಅಭ್ಯಾಸ ಮಾಡಿ ಬಿ.ಎ. ಪದವಿ ಪಡೆದರು. ಅಲ್ಲಿಯೇ ಬಿ.ಎಲ್. ಪದವಿಯನ್ನೂ ಪಡೆದರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಪತ್ರಿಕೋದ್ಯಮದಲ್ಲಿ ಆಸಕ್ತಿ ತಳೆದಿದ್ದರು. ಸ್ವಲ್ಪಕಾಲ ಮದರಾಸಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಕ್ಯೂರೇಟರ್ ಆಗಿ ಕೆಲಸ ಮಾಡಿದರು. ಅದನ್ನು ಬಿಟ್ಟು ಮದರಾಸ್ ಟೈಮ್ಸ್ ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು. ಅನಂತರ ಅಲಹಾಬಾದಿಗೆ ತೆರಳಿ ದಿ ಲೀಡರ್ ಎಂಬ ಪತ್ರಿಕೆಯ ಸಂಪಾದಕರಾಗಿ ಸಾಕಷ್ಟು ಪ್ರಸಿದ್ಧಿಪಡೆದರು. ಇವರ ಖ್ಯಾತಿಯನ್ನು ಗಮನಿಸಿದ ಎಂ.ವಿಶ್ವೇಶ್ವರಯ್ಯನವರು ಇವರನ್ನು ಮೈಸೂರಿಗೆ ಆಹ್ವಾನಿಸಿ ದಿ ಮೈಸೂರ್ ಎಕನಾಮಿಕ್ ಜರ್ನಲ್ ಪತ್ರಿಕೆಯ ಸಂಪಾದಕರಾಗಿ ನೇಮಿಸಿದರು. ಇವರು ತಮ್ಮ ಜೀವಿತದ ಕೊನೆಯವರೆಗೂ ಈ ಪತ್ರಿಕೆಯೊಡನೆ ಸಂಪರ್ಕವಿಟ್ಟುಕೊಂಡಿದ್ದರು.

	ಬೆಂಗಳೂರು ಪ್ರೆಸ್‍ನ ಸ್ಥಾಪನೆಗೂ ಇವರೇ ಮುಖ್ಯ ಕಾರಣಕರ್ತರು. ಅದರ ಕಾರ್ಯದರ್ಶಿ ಮತ್ತು ನಿರ್ದೇಶಕರಾಗಿ ದುಡಿದು ಆ ಮುದ್ರಣಾಲಯದ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೆಂಗಳೂರಿನ ಪುರಸಭೆಯಲ್ಲಿ ಬಹುಕಾಲ ಚುನಾಯಿತ ಪ್ರತಿನಿಧಿಯಾಗಿದ್ದ ಇವರು ಈಗಿನ ಗವೀಪುರ ಗುಟ್ಟಹಳ್ಳಿ ಬಡಾವಣೆಯ ನಿರ್ಮಿತಿಗೆ ಕಾರಣರಾದರು. ಇವರು ಮೈಸೂರು ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು (1934-40). ಮೈಸೂರು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಮತ್ತು ಸೆನೆಟ್ ಸದಸ್ಯರಾಗಿದ್ದರು. ಶ್ರೀ ಕೃಷ್ಣರಾಜ ಸಿಲ್ವರ್ ಜ್ಯೂಬಿಲಿ ಟೆಕ್ನಲಾಜಿಕಲ್ ಇನ್‍ಸ್ಟಿಟ್ಯೂಟ್‍ನ ಸ್ಥಾಪನೆಯಲ್ಲಿಯೂ ಇವರು ಮಹತ್ತರ ಪಾತ್ರವಹಿಸಿದರು. ಇವರು ಅನೇಕ ವ್ಯಾಪಾರ, ಉದ್ದಿಮೆಗಳ ಸಂಸ್ಥೆಯಲ್ಲಿಯೂ ಸೇವೆಸಲ್ಲಿಸಿದ್ದಾರೆ. ಕೆಲಕಾಲ ಇವರು ಆಮ್ಕೊಬ್ಯಾಟರೀಸ್ ಸಂಸ್ಥೆಯ ಸ್ಥಾಪಕ-ನಿರ್ದೇಶಕರಾಗಿದ್ದರು. ಬೆಂಗಳೂರಿನ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯಾಗಿ ಕೆಲಸಮಾಡಿದರು. ಇಂಡಿಯನ್ ಹಿಸ್ಟಾರಿಕಲ್ ರೆಕಾಡ್ರ್ಸ್ ಕಮಿಷನ್‍ನ ಸದಸ್ಯರಾಗಿಯೂ ಅದರ ವ್ಯಾವಹಾರಿಕ ಸದಸ್ಯರಾಗಿಯೂ ಕೆಲಸ ಮಾಡಿದರು. ಇಂಡಿಯನ್ ಪಿ.ಇ.ಎನ್. ಸದಸ್ಯರಾಗಿಯೂ ಗ್ರೇಟ್ ಬ್ರಿಟನ್ನಿನ ರಾಯಲ್ ಆಂಥ್ರೊಪೊಲಾಜಿಕಲ್ ಇನ್‍ಸ್ಟಿಟ್ಯೂಟಿನ ಸದಸ್ಯರಾಗಿಯೂ ರಾಯಲ್ ಸೊಸೈಟಿ ಆಫ್ ಎಕನಾಮಿಕ್ಸ್‍ನ ಫೆಲೊ ಆಗಿಯೂ ಆಯ್ಕೆಯಾಗಿದ್ದರು.
	
ಇವರು ಬಹುಭಾಷಾ ಜ್ಞಾನವುಳ್ಳ ವಿದ್ವಾಂಸರಾಗಿದ್ದರು. ಇಂಗ್ಲಿಷ್, ಲ್ಯಾಟಿನ್, ಫ್ರೆಂಚ್, ಜರ್ಮನ್, ಸಂಸ್ಕøತ, ಕನ್ನಡ, ತೆಲುಗು, ಮರಾಠಿ, ತಮಿಳು ಭಾಷೆಗಳಲ್ಲಿ ಇವರಿಗೆ ಅಪಾರ ಪರಿಶ್ರಮವಿತ್ತು. ಇವರು ಅನೇಕ ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತೆಲುಗು ಭಾಷೆಯ ಪರೀಕ್ಷಕರಾಗಿದ್ದರು.

	ಕರ್ನಾಟಕ ಇತಿಹಾಸ ರಚನೆಯಲ್ಲಿ ಇವರದು ದೊಡ್ಡ ಹೆಸರು. ದಕ್ಷಿಣ ಕರ್ನಾಟಕದ, ಅಂದರೆ ಆಗಿನ ಮೈಸೂರು ಪ್ರಾಂತದ ಇತಿಹಾಸ ರಚನೆಗೆ ಇವರೇ ನಾಂದಿ ಹಾಡಿದವರು. ಇವರು ಸಂಪಾದಿಸಿರುವ ಮೈಸೂರು ಗೆಜೆಟಿಯರ್ಸ್ ಹೆಬ್ಬೊತ್ತಿಗೆಗಳು ಇತಿಹಾಸ ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ಪ್ರಮಾಣಪೂರ್ವಕವಾದ ಗ್ರಂಥಗಳಾಗಿವೆ. ಲೂಯಿ ರೈಸ್ ಅವರು ರಚಿಸಿದ ಗೆಜೆಟಿಯರ್ ಅನ್ನು ನವೀಕರಿಸಲು ಮೈಸೂರು ಸರ್ಕಾರ 1924ರಲ್ಲಿ ಇವರನ್ನು ಸಂಪಾದಕರನ್ನಾಗಿ ನಿಯಮಿಸಿತು. ಇವರು ಈ ಕೆಲಸವನ್ನು ಸಮರ್ಪಕವಾಗಿ ಮಾಡಿ ಏಳು ಸಂಪುಟಗಳಲ್ಲಿ ಮೈಸೂರು ಗೆಜೆಟಿಯರ್ ಮಾಲೆಯನ್ನು ಪ್ರಕಾಶ ಪಡಿಸಿದರು. ಇತಿಹಾಸ, ನಾಣ್ಯಶಾಸ್ತ್ರ, ಶಾಸನಶಾಸ್ತ್ರ, ವಾಸ್ತುಶಿಲ್ಪ ಮುಂತಾದ ವಿಷಯಗಳಲ್ಲಿ ಇಂದಿಗೂ ಈ ಸಂಪುಟಗಳು ಕರ್ನಾಟಕ ಇತಿಹಾಸದ ಅಭ್ಯಾಸಿಗಳಿಗೆ ಅಮೂಲ್ಯ ಆಕರಗಳಾಗಿವೆ. ಇವರು ರಚಿಸಿದ ಇನ್ನೊಂದು ಗ್ರಂಥ ಮೂರು ಸಂಪುಟಗಳ ಹಿಸ್ಟರಿ ಆಫ್ ಮೈಸೂರ್ (1399-1799). ಮೈಸೂರು ಒಡೆಯರ ರಾಜವಂಶಕ್ಕೆ ಸಂಬಂಧಿಸಿದ ಈ ಕೃತಿ 2,840 ಪುಟಗಳನ್ನೊಳಗೊಂಡಿದೆ. ಶ್ರೀಪತಿ ಪಂಡಿತಾಚಾರ್ಯರು ರಚಿಸಿದ ಶ್ರೀಕರಭಾಷ್ಯಕ್ಕೆ ಬರೆದ ದೀರ್ಘವ್ಯಾಖ್ಯಾನ (ಸು. 885 ಪುಟ) ಇವರ ಮತ್ತೊಂದು ಕೃತಿ. ಈ ಗ್ರಂಥಗಳಲ್ಲದೆ ಇವರು ಅನೇಕ ಪ್ರೌಢಲೇಖನ ಗಳನ್ನು ಬರೆದಿದ್ದಾರೆ.

	ಇವರು ಇತಿಹಾಸದ ಮೂಲತತ್ತ್ವಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಇತಿಹಾಸ ರಚನೆಗೆ ಆಕರಗಳೇ ಮೂಲ; ಅವು ಸಮರ್ಪಕವಾಗಿದ್ದರೆ ಮಾತ್ರ ಇತಿಹಾಸ ಪ್ರಮಾಣಪೂರ್ವಕವಾಗಿರುತ್ತದೆ ಎಂಬುದನ್ನು ಬಲ್ಲವರಾಗಿದ್ದ ಇವರು ಆಕರಗಳಿಗೆ ವಿಶೇಷ ಗಮನ ಕೊಟ್ಟಿದ್ದಾರೆ. ಇದರ ರಚನೆಗಳಲ್ಲಿ ರಾಜಕೀಯದ ಜೊತೆಗೆ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಂಸ್ಕøತಿಕ ವಿಷಯಗಳಿಗೆ ಹೆಚ್ಚಿನ ಮಹತ್ತ್ವ ಕಾಣಬರುತ್ತದೆ. ಹೀಗೆ ಇತಿಹಾಸ ರಚಿಸುವವರಿಗೆ ಒಂದು ಮಾದರಿಯನ್ನು ಹಾಕಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.

	ಇವರನ್ನು ಅನೇಕ ಸಂಘಸಂಸ್ಥೆಗಳು, ಸರ್ಕಾರಗಳು ಗೌರವಿಸಿವೆ. ಬ್ರಿಟಿಷ್ ಸರ್ಕಾರ 1911ರಲ್ಲಿ ಇವರಿಗೆ ರಾವ್ ಸಾಹೇಬ್ ಎಂಬ ಬಿರುದನ್ನು ನೀಡಿ ಗೌರವಿಸಿತು. ಲಾರ್ಡ್ ಲಿನ್‍ಲಿತ್‍ಗೊ ಇವರಿಗೆ ರಾವ್‍ಬಹದ್ದೂರ್ ಎಂಬ ಬಿರುದನ್ನು ನೀಡಿ ಗೌರವಿಸಿದ. ನಾಲ್ವಡಿ ಕೃಷ್ಣರಾಜ ಒಡೆಯರು ಇವರಿಗೆ ರಾಜಚರಿತವಿಶಾರದ ಎಂಬ ಬಿರುದನ್ನು ನೀಡಿ ಗೌರವಿಸಿದರು. ಇವರು 1946ರಲ್ಲಿ ನಿಧನಹೊಂದಿದರು.	
							
		(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ